ಬೆಳಗಾವಿ: ಅಂತಿಮ ಸೆಮಿಸ್ಟರ್ ಬಿ.ಇ./ಬಿ.ಟೆಕ್/ಬಿ.ಪ್ಲಾನ್/ಬಿ.ಆರ್ಕ್/ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯೊಳಗೆ ಪ್ರಕಟಿಸುವ ಮೂಲಕ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಹೊಸ ಇತಿಹಾಸ ನಿರ್ಮಿಸಿದೆ.
ಮೇ 30ರಂದು ಅಂತಿಮ ಸೆಮಿಸ್ಟರ್‌ನ 50,321 ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ಕೇವಲ ಒಂದು ಗಂಟೆಯ ನಂತರ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ತಿಳಿಸಿದ್ದಾರೆ.
ಕಳೆದ ಬಾರಿ ಮೂರು ಗಂಟೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಿ ದಾಖಲೆ ಬರೆದಿದ್ದ ವಿಟಿಯು ಈ ಬಾರಿ ಕೇವಲ ಒಂದೇ ಗಂಟೆಯಲ್ಲಿ ಫಲಿತಾಂಶ ನೀಡಿ ತನ್ನದೇ ದಾಖಲೆಯನ್ನು ಮುರಿದು ಹೊಸ ಮುನ್ನುಡಿ ಬರೆದಿದೆ. ಈ ಹಿಂದೆ 2019 ರ ಬ್ಯಾಚ್‌ನ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ 43,662 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು 2023 ಮೇ 30ರಂದು ಬಿಡುಗಡೆಗೊಳಿಸಿತ್ತು. ಇದಾದ ಬಳಿಕ 2020ರ ಬ್ಯಾಚ್‌ನ ಪರೀಕ್ಷೆ ಮುಗಿದ 3 ಗಂಟೆಯೊಳಗೆ 37,011 ವಿದ್ಯಾರ್ಥಿಗಳ ಫಲಿತಾಂಶವನ್ನು 2024 ಮೇ 30ರಂದು ಪ್ರಕಟಿಸಿ ಕ್ರಾಂತಿ ಮಾಡಿತ್ತು.
ಈಗ ಮೇ 30ರಂದು 2021ರ ಬ್ಯಾಚ್‌ನ ಕೊನೆಯ ಸೆಮಿಸ್ಟರ್‌ನ 50,321 ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಕೇವಲ 1 ಗಂಟೆಯೊಳಗೆ ಪ್ರಕಟಿಸಿ ಮತ್ತೊಂದು ಐತಿಹಾಸಿಕ ದಾಖಲೆಗೆ ವಿಟಿಯು ಸಾಕ್ಷಿ ಆಗಿದೆ. ಅಲ್ಲದೇ ಈ ಫಲಿತಾಂಶವನ್ನು ಎಲ್ಲ ವಿದ್ಯಾರ್ಥಿಗಳಿಗೆ ಅವರ ವಾಟ್ಸಪ್‌ನಲ್ಲಿ ಕಳುಹಿಸಲಾಗಿದೆ ಎಂದು ಪ್ರೊ. ಎಸ್. ವಿದ್ಯಾಶಂಕರ ತಿಳಿಸಿದ್ದಾರೆ.
ಫಲಿತಾಂಶ ಬೇಗನೇ ಬಿಡುಗಡೆ ಆಗುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಾಟ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಮೇ 31ರಿಂದ ತಮ್ಮ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳು ತಮ್ಮ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳಿಗೆ(ಪಿಡಿಸಿ) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜೂನ್ 3ರಿಂದ ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು (ಪಿಡಿಸಿ) ವಿತರಣೆ ಮಾಡಲಾಗುತ್ತದೆ. ಅದೇರೀತಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪಿಡಿಸಿ ಅರ್ಜಿ ಸಲ್ಲಿಸಬಾರದು ಎಂದು ಪ್ರೊ.ಎಸ್. ವಿದ್ಯಾಶಂಕರ ತಿಳಿಸಿದ್ದಾರೆ.