ಬೆಳಗಾವಿ: “ಆಪರೇಷನ್ ಸಿಂಧೂರ” ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಎಂಬ ಧ್ಯೇಯದೊಂದಿಗೆ ಸೋಮವಾರ ಬಿಜೆಪಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ “ತಿರಂಗಾ ಯಾತ್ರೆ” ನಡೆಯಿತು.
ಬೆಳಗಾವಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಿಂದ ಆರಂಭವಾದ ರ್ಯಾಲಿಯು ರಾಣಿ ಚನ್ನಮ್ಮ ವೃತ್ತ, ಕಾಕತಿವೇಸ್, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮಲಿಂಗಖಿಂಡ ಗಲ್ಲಿ, ಕಪಿಲೇಶ್ವರ ಮೇಲ್ಸೇತುವೆ ಮಾರ್ಗವಾಗಿ ಶಿವಾಜಿ ಉದ್ಯಾನಕ್ಕೆ ಬಂದು ಮುಕ್ತಾಯವಾಯಿತು.
ತಿರಂಗಾ ಯಾತ್ರೆಯುದ್ಧಕ್ಕೂ ಭಾರತ್ ಮಾತಾ, ಭಾರತೀಯ ಸೇನೆ, ಸೈನಿಕರ ಪರವಾಗಿ ಜಯಘೋಷಗಳು ಮೊಳಗಿದವು. 100 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ಬಿಜೆಪಿ ಕಾರ್ಯಕರ್ತರು, ಮಾಜಿ ಸೈನಿಕರು, ಸಾರ್ವಜನಿಕರು ಉತ್ಸಾಹದಿಂದ ಹೆಜ್ಜೆ ಹಾಕಿದರು.
ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕೆಲವರು ಭಾರತದಲ್ಲಿ ಇದ್ದುಕೊಂಡೆ ಪಾಕಿಸ್ತಾನ ಪ್ರೇಮ ವ್ಯಕ್ತಪಡಿಸುತ್ತಿದ್ದಾರೆ. ಅಂತವರನ್ನು ಪಾಕಿಸ್ತಾನ ಗಡಿಯಲ್ಲಿ ಬಿಟ್ಟರೆ, ಸೈನಿಕರ ಪರಿಸ್ಥಿತಿ ಅರ್ಥ ಆಗುತ್ತದೆ. ಪೆಹಲ್ಗಾಮ್ ನಲ್ಲಿ ಮೃತಪಟ್ಟವರ ಮನೆಗೆ ಅವರು ಭೇಟಿ ಕೊಟ್ಟರೆ ಗಂಡನ ಕಳೆದುಕೊಂಡ ಮಹಿಳೆಯರ ನೋವು ಗೊತ್ತಾಗುತ್ತದೆ. ಪಕ್ಷದ ಆಧಾರದ ಮೇಲೆ ನೋಡುವುದು ಬಿಡಬೇಕು. ದೇಶ ಸಂಕಟದಲ್ಲಿದ್ದಾಗ ದೇಶದ ಪರವಾಗಿ ಹೇಳಿಕೆ ಕೊಡಬೇಕು. ಇಲ್ಲದಿದ್ದರೆ ನಿಮಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ನಾಯಕರಿಗೆ ಏನಾದರೂ ದೇಶಭಕ್ತಿ ಇದ್ದರೆ ತಕ್ಷಣವೇ ಕೊತ್ತೂರು ಮಂಜುನಾಥ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಗೊಳಿಸಿರುವ ನಮ್ಮ ಸೈನಿಕರಿಗೆ ಧೈರ್ಯ ತುಂಬಬೇಕು ಮತ್ತು ನಾವು ಅವರ ಜೊತೆಗೆ ಇದ್ದೇವೆ ಎಂಬ ಸಂದೇಶ ಕೊಡುವುದಕ್ಕಾಗಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದೆವೆ. ಇನ್ನು ದೇಶದ ಸೈನಿಕರ ಕಾರ್ಯವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ ಎಲ್ಲಿಯವರು..? ಆತನ ಆಧಾರ್ ಕಾರ್ಡ್ ಚೆಕ್ ಮಾಡಬೇಕು..? ನಮ್ಮ ಸೈನಿಕರ ಬಗ್ಗೆ ನಮಗೆಲ್ಲಾ ಹೆಮ್ಮೆ ಇರಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಕಿಡಿಕಾರಿದರು.
ಈ ವೇಳೆ ಕಾರಂಜಿಮಠದ ಗುರುಶಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗ ಕೈವಲ್ಯಾನಂದ ಸ್ವಾಮೀಜಿ, ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಅನಿಲ ಬೆನಕೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮುಖಂಡರಾದ ಮಹಾಂತೇಶ ಒಕ್ಕುಂದ, ಡಾ.ಸೋನಾಲಿ ಸರ್ನೋಬತ್ ,ಮಲ್ಲಿಕಾರ್ಜುನ ಮಾದಮ್ಮನವರ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.