ವಿಜಯಪುರ: ದಶಕಗಳ ಹಿಂದೆ ಭೀಮಾತೀರದಲ್ಲಿ ಅಟ್ಟಹಾಸ ಮೆರೆದಿದ್ದ ‘ಹಂತಕ’ ಕುಖ್ಯಾತಿಯ ಚಂದಪ್ಪ ಹರಿಜನನ ಶಿಷ್ಯ, ಕೆಲ ಅಕ್ರಮಗಳಲ್ಲಿ ಭಾಗಿಯಾಗಿದ್ದ ಬಾಗಪ್ಪ ಹರಿಜನನ್ನು ಮಂಗಳವಾರ ರಾತ್ರಿ ವಿಜಯಪುರದಲ್ಲಿ ಹತ್ಯೆ ಮಾಡಲಾಗಿದೆ.
ವಿಜಯಪುರ ನಗರದ ರೆಡಿಯೋ ಮೈದಾನದಲ್ಲಿ ರಾತ್ರಿ 9.30 ರ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಚಂದಪ್ಪ ಹರಿಜನನ ಶಿಷ್ಯನಾಗಿದ್ದ ಬಾಗಪ್ಪ ಆಲಮೇಲ ಸಮೀಪದ ಬ್ಯಾಡಗಿಹಾಳದ ನಿವಾಸಿ. ಚಂದಪ್ಪನ ಆಸ್ತಿ ಬಾಗಪ್ಪನ ಹೆಸರಲ್ಲಿದ್ದವು. ಹೀಗಾಗಿ, ಚಂದಪ್ಪ ಹರಿಜನ ಪತ್ನಿ ಹಾಗೂ ಬಾಗಪ್ಪ ನಡುವೆ ವಿವಾದ ಉಂಟಾಗಿತ್ತು. ಭೀಮಾತೀರದಲ್ಲಿ ಹಂತಕರ ಹಾವಳಿ ಅಂತ್ಯಗೊಳ್ಳುತ್ತಿದ್ದಂತೆ ಬಾಗಪ್ಪ ವಿಜಯಪುರ, ಕಲಬುರಗಿ, ಬೀದರ್, ಸೊಲ್ಲಾಪುರ, ಪುಣೆಯಲ್ಲಿ ಅಕ್ರಮ ಚಟುವಟಿಕೆ ನಡೆಸಿಕೊಂಡಿದ್ದ. ಈತನ ಮೇಲೆ ಹಲವು ಪ್ರಕರಣಗಳಿದ್ದವು.
ಕೆಲ ವರ್ಷಗಳ ಹಿಂದೆ ವಿಜಯಪುರ ನ್ಯಾಯಾಲಯದ ಆವರಣದಲ್ಲಿ ಬಾಗಪ್ಪ ಮೇಲೆ ಫೈರಿಂಗ್ ಆಗಿತ್ತು. ನಂತರ ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆದಿದ್ದ. ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಬಾಗಪ್ಪ ಹತ್ಯೆಯಿಂದಾಗಿ ಭೀಮಾತೀರದಲ್ಲಿ ಮತ್ತೆ ದ್ವೇಷ ಮರುಕಳಿಸಿದಂತಾಗಿದೆ.
ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಬಾಗಪ್ಪ ರಾತ್ರಿ 8-50 ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ SP ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂತಕರ ಪತ್ತೆಗಾಗಿ ASP ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.ಈ ಹಿಂದೆ 2023 ರಲ್ಲಿ ಕೋರ್ಟ್ ಆವರಣದಲ್ಲಿ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಅಪಚಿತರ ವ್ಯಕ್ತಿಯೊಬ್ಬ ಏಕಾಏಕಿ ಐದು ಸುತ್ತು ಗುಂಡು ಹಾರಿಸಿದ್ದರಿಂದ ಬಾಗಪ್ಪ ಹರಿಜನನ ಎದೆ ಭಾಗಕ್ಕೆ ಹೊಕ್ಕಿತ್ತು. ಕೂಡಲೇ ಆತನನ್ನು ಬಿಎಲ್ ಡಿಇ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಬದುಕುಳಿದಿದ್ದ. ಆದರೆ, ಈಗ ಸುಮಾರು 20 ಜನರಿಂದ ತಂಡ ಯೋಜಿತ ರೀತಿಯಲ್ಲಿ ದಾಳಿ ನಡೆಸಿದ್ದು, ಬಾಗಪ್ಪ ಹರಿಜನ್ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.
ಯಾರಿದು ಬಾಗಪ್ಪ ಹರಿಜನ್?
ಭೀಮಾ ತೀರದ ಹಂತಕದ ಕುಖ್ಯಾತಿಯಲ್ಲಿ ಬಾಗಪ್ಪ ಹರಿಜನ ಕೂಡ ಒಬ್ಬ. ಈ ಹಿಂದೆ ಇಡೀ ಭೀಮಾತೀರವನ್ನು ನಡುಗಿಸಿದ್ದ ಚಂದಪ್ಪ ಹರಿಜನನ ಸಹೋದರ ಸಂಬಂಧಿ ಕೂಡ ಆಗಿರುವ ಬಾಗಪ್ಪ ಹರಿಜನ ಚಂದಪ್ಪ ಹರಿಜನನ ಬಲಗೈ ಬಂಟನಾಗಿದ್ದ. ಚಂದಪ್ಪನ ಸಾವಿನ ಬಳಿಕ ಕುಟುಂಬದಲ್ಲಿ ಉಂಟಾಗಿದ್ದ ಆಸ್ತಿ ಗಲಾಟೆ ಪ್ರಕರಣದಲ್ಲಿ ಬಾಗಪ್ಪ ಚಂದಪ್ಪನ ಸಹೋದರ ಬಸಪ್ಪ ಹರಿಜನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ.
ಆಲಮೇಲ ಪೊಲೀಸ್‌ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ಬ್ಯಾಡಗಿಹಾಳ ಗ್ರಾಮದ ಬಸ್ ಕಂಡಕ್ಟರ್ ಲಾಳಸಂಗಿ ಎಂಬುವರ ಕೊಲೆ ಪ್ರಕರಣದಲ್ಲಿ ಬಾಗಪ್ಪ ಪ್ರಮುಖ ಪಾತ್ರಧಾರಿಯಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.