ಧಾರವಾಡ, ಫೆಬ್ರವರಿ 07: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ (Dharwad Highcourt) ತೀರ್ಪು ಪ್ರಕಟಿಸಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಗೊಳಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆ ಅಸಮರ್ಪಕ ಎನ್ನುವುದಕ್ಕೆ ಕಾರಣಗಳಿಲ್ಲ, ಲೋಕಾಯುಕ್ತ ತನಿಖೆ ತಾರತಮ್ಯ ಪೂರಿತ ಎಂಬುದಕ್ಕೆ ಆಧಾರಗಳಿಲ್ಲ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಪ್ರಕರಣವನ್ನು ಸಿಬಿಐಗೆ ನೀಡಲು ನಿರಾಕರಿಸಿ ಆದೇಶ ಹೊರಡಿಸಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಇನ್ನು ತೀರ್ಪು ಪ್ರಕಟವಾಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ಕಾನೂನು ಹೋರಾಟ ಮುಂದುವರಿಸುತ್ತೇವೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಹೈಕೋರ್ಟ್ ಆದೇಶ ಪ್ರತಿ ಸಿಕ್ಕಿದ ಕೂಡಲೇ ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವೆ. ಲೋಕಾಯುಕ್ತ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿದರು.
ಲೋಕಾಯುಕ್ತ ಮುಡಾ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡ ದಿನದಿಂದಲೂ ದೂರುದಾರ ಸ್ನೇಹಮಯಿ ಕೃಷ್ಣರದ್ದು ಒಂದೇ ಅಸಮಾಧಾನ. ಸಮರ್ಪಕ ತನಿಖೆಯಾಗಲ್ಲ, ನಮಗೆ ನ್ಯಾಯ ಸಿಗಲ್ಲ ಅಂತಿದ್ದ ಸ್ನೇಹಮಯಿ ಸಿಬಿಐ ತನಿಖೆಗೆ ಆಗ್ರಹ ಮಾಡಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರೂ ತನಿಖೆಯನ್ನು ಪೂರ್ಣಗೊಳಿಸಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಈ ವರದಿಯನ್ನೂ ಪರಿಶೀಲಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿರುವ ಹೈಕೋರ್ಟ್ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ.
3 ಲಕ್ಷ 26 ಸಾವಿರ ಮೊತ್ತದ ಜಮೀನು ಸ್ವಾಧೀನಕ್ಕೆ ಬದಲಾಗಿ ದುಬಾರಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಜಮೀನು ಭೂಪರಿವರ್ತನೆ ಮಾಡಲಾಗಿದೆ. ಕ್ಯಾಬಿನೆಟ್ ಟಿಪ್ಪಣಿ, ಮುಖ್ಯ ಕಾರ್ಯದರ್ಶಿ ಟಿಪ್ಪಣಿಯೂ ಸಿಎಂ ಪತ್ನಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ನಿಯಮಗಳನ್ನು ತಮಗಿಷ್ಟ ಬಂದಂತೆ ತಿರುಚಲಾಗಿದೆ.
ಪ್ರಭಾವಿಗಳಿರುವ ಈ ಕೇಸಿನಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಆರೋಪಿ ಮುಖ್ಯಮಂತ್ರಿ ಎಂಬ ಒಂದೇ ಕಾರಣಕ್ಕೆ ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಉದಾಹರಣೆಗಳಿವೆ. ಸಿಎಂ ಉಳಿಸಲು ಇಡೀ ಸಚಿವ ಸಂಪುಟವೇ ಒಟ್ಟಾಗಿರುವಾಗ ಸ್ಥಳೀಯ ಪೊಲೀಸರಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯ ಎತ್ತಿಹಿಡಿಯಲು ಸಿಬಿಐ ತನಿಖೆ ಅನಿವಾರ್ಯವಿದ್ದು, ಸ್ವತಂತ್ರ ನ್ಯಾಯಸಮ್ಮತ ತನಿಖೆಯಾಗಬೇಕಿದೆ ಎಂದು ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಲೋಕಾಯುಕ್ತ ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದಿದ್ದಾರೆ. ಆದರೆ ಸಿಬಿಐ ಕೂಡ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ ಎನ್ನಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆ ಕಳಂಕಿತ ಎಂದು ಹೇಳಲು ಆಗಲ್ಲ. ಯಾಕಂದ್ರೆ ಲೋಕಾಯುಕ್ತ ಪೊಲೀಸರ ಮೇಲೆ ಲೋಕಾಯುಕ್ತ ಸಂಸ್ಥೆಯ ನಿಗಾ ಇದೆ. ಹೀಗಾಗಿ ಲೋಕಾಯುಕ್ತ ತನಿಖೆ ಸ್ವತಂತ್ರವಾಗಿರಲಿದೆ. ಸಿಬಿಐ ಸ್ವತಂತ್ರ ಎಂದಾದರೆ ಲೋಕಾಯುಕ್ತ ಕೂಡ ಸ್ವತಂತ್ರ ಸಂಸ್ಥೆಯಾಗಿದ್ದು, ಅದು ನಡೆಸ್ತಿರೋ ತನಿಖೆ ಸೂಕ್ತವಾಗಿದೆ.
ತನಿಖೆ ತಾರತಮ್ಯಪೂರಿತವಾಗಿದ್ದಾಗ ಬೇರೆ ಸಂಸ್ಥೆಯಿಂದ ತನಿಖೆ ಕೋರಬಹುದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಿದ ಬಳಿಕ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅಂತಿಮ ವರದಿ ಸಲ್ಲಿಕೆಗೂ ಮೊದಲೇ ಹೈಕೋರ್ಟ್ ತಾನೇ ವರದಿ ನೋಡಿ ತೀರ್ಮಾನಿಸಲು ಅವಕಾಶವಿಲ್ಲ.
ಲೋಕಾಯುಕ್ತ ಪೊಲೀಸರ ಅಂತಿಮ ವರದಿಯಲ್ಲಿ ಲೋಪವಿದ್ದರೆ ಆಕ್ಷೇಪಿಸಿ ಮರು ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಬಹುದು. ಆದರೆ ತನಿಖೆ ಮಧ್ಯದಲ್ಲೇ, ವರದಿ ಏನೆಂದು ಎಲ್ಲರಿಗೂ ತಿಳಿಯದೇ ವರದಿಯ ಬಗ್ಗೆ ವಾದ ಆಲಿಸದೇ ತೀರ್ಮಾನಿಸಬಾರದು ಎಂದು ವಾದ ಮಂಡಿಸಿದ್ದರು.
ಸಿಬಿಐ ತನಿಖೆಗೆ ಅರ್ಹವಾಗಲು ಇದು ಅಪರೂಪದ ಪ್ರಕರಣವಲ್ಲ. ಲೋಕಾಯುಕ್ತ ತನಿಖೆಯಲ್ಲಿ ಮಧ್ಯಪ್ರವೇಶಿಸಿ ಸಿಬಿಐಗೆ ಹಸ್ತಾಂತರಿಸುವುದು ಸರಿಯಲ್ಲ. ದೂರುದಾರರಿಗೆ ರಾಜ್ಯಪಾಲರ ಅನುಮತಿ ಬೇಕಿತ್ತು ಪಡೆದರು. ಮೊದಲಿಗೆ ಲೋಕಾಯುಕ್ತ ಪೊಲೀಸರ ತನಿಖೆ ಕೋರಿದರು. ತನಿಖೆ ಆಗುವ ಮೊದಲೇ ಸಿಬಿಐ ತನಿಖೆ ಕೇಳುತ್ತಿದ್ದಾರೆ.
ಲೋಕಾಯುಕ್ತ ಪೊಲೀಸರ ತನಿಖೆಯ ಲೋಪವೇನೆಂದು ಹೇಳಿಲ್ಲ. ಆರೋಪಿ ಸ್ಥಾನದಲ್ಲಿ ಸಿಎಂ ಇದ್ದಾರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದು ತಪ್ಪು ಮೇಲ್ಪಂಕ್ತಿಗೆ ಕಾರಣವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದ್ದರು.