ಬೆಳಗಾವಿ, ಫೆಬ್ರವರಿ 01: ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ (BIMS) ಸಂಭವಿಸಿದ ಬಾಣಂತಿಯರ ಸಾವು ಪ್ರಕರಣಗಳು ದಿನ ದಿನಕ್ಕೆ ಹೆಚ್ಚಾಗುತ್ತಿವೆ.
ಮೊನ್ನೆ ನಡೆದ ಪ್ರಕರಣ ಮಾಸುವ ಮುನ್ನವೇ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿಯ (Maternal) ಸಾವಾಗಿದೆ. ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ನಿವಾಸಿ ಗಂಗವ್ವಾ ಗೊಡಕುಂದ್ರಿ (31) ಮೃತ ಬಾಣಂತಿ ಎಂದು ಗುರುತಿಸಲಾಗಿದೆ. ಗಂಗವ್ವಾ ಅವರಿಗೆ ಜನವರಿ 31 ರಂದು 12 ಗಂಟೆ ಸುಮಾರು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಸಿಸೇರಿಯನ್ ಬಳಿಕ ಬಾಣಂತಿ ಗಂಗವ್ವಾ ಆರೋಗ್ಯವಾಗಿದ್ದರು. ನಂತರ ಮಧ್ಯಾಹ್ನದ ವೇಳೆಯಲ್ಲಿ ಆರೋಗ್ಯದಲ್ಲಿ ಏರುಪೇರು ಆಗಿರುವುದನ್ನು ಗಮನಿಸಿ ಆಸ್ಪತ್ರೆಯ ಸಿಬ್ಬಂದಿಗಳು ಕುಟುಂಬದವರಿಗೆ ಬರಿ ಸಹಿ ಮಾಡಲು ಒತ್ತಾಯ ಮಾಡಿದರು ಎಂದು ಕುಟುಂಬದವರು ದೂರಿದ್ದಾರೆ.
ಜನವರಿ 28ರಂದು ಅವರು ಬಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಎರಡು ದಿನಗಳವರೆಗೆ ಅಬ್ಸರ್ವರೇಶನ್ ಇದ್ದರೂ ಕೂಡ ಯಾವುದೇ ರೀತಿ ಫಲಕಾರಿಯಾಗುವಂತ ಚಿಕಿತ್ಸೆಗಳನ್ನು ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.