ಕೊಪ್ಪಳ: ಮಕ್ಕಳಿಗೆ ವಿಟಮಿನ್ ಮತ್ತು ಪ್ರೋಟೀನ್ ಮುಖ್ಯ. ಹಾಗಾಗಿ, ಮಕ್ಕಳಿಗೆ ಬಿಸಿ ಊಟದ ಜೊತೆ ಮೊಟ್ಟೆಯನ್ನು ನೀಡಲಾಗುತ್ತದೆ. ಇತ್ತೀಚೆಗೆ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ವಾರದಲ್ಲಿ ಆರು ದಿನವೂ ಮೊಟ್ಟೆ ನೀಡಲು ನಿರ್ಧರಿಸಲಾಗಿದೆ. ಆದರೆ ಕೊಪ್ಪಳ ಜಿಲ್ಲೆಯ ಶಾಲೆಯೊಂದರ ಮುಖ್ಯೋಪಾಧ್ಯಾಯರು ಮಕ್ಕಳ ಮೊಟ್ಟೆಗೆ ಕನ್ನ ಹಾಕಿರುವ ಆರೋಪ ಕೇಳಿ ಬಂದಿದೆ.
ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಇಲ್ಲದ್ದು ಕಂಡು ತಹಶೀಲ್ದಾರ್ ಶಾಕ್
ಕೊಪ್ಪಳದ ಶಿವಪುರ ಪ್ರಾಥಮಿಕ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿದೆ. ಬಿಸಿ ಊಟದ ವೇಳೆ ಕೊಪ್ಪಳ ತಹಶೀಲ್ದಾರ್ ಶಾಲೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಇಲ್ಲದ್ದನ್ನು ಕಂಡು ಶಾಕ್ ಆಗಿದ್ದಾರೆ.
ಮುಖ್ಯೋಪಾಧ್ಯಾಯರಿಗೆ ತಹಶೀಲ್ದಾರ್ ತರಾಟೆ
ತಹಶೀಲ್ದಾರ್ ವಿಠಲ ಚೌಗಲ್ ಅವರು ಮಧ್ಯಾಹ್ನದ ಬಿಸಿಯೂಟ ಸಮಯದ ವೇಳೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಇಲ್ಲದನ್ನು ಕಂಡು ತಹಶೀಲ್ದಾರ್ ಶಾಕ್ ಆಗಿದ್ದಾರೆ. ಮೊಟ್ಟೆ ಎಲ್ಲಿ ಎಂದು ಮಕ್ಕಳಿಗೆ ಕೇಳಿದ್ದಾರೆ. ನಮಗೆ ಕೊಟ್ಟಿಲ್ಲ ಸರ್ ಬರೀ ಬಾಳೆಹಣ್ಣು ಕೊಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ. ಆಗ ತಹಶೀಲ್ದಾರ್, ಮುಖ್ಯೋಪಾಧ್ಯಾಯ ವೀರಣ್ಣಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ದರ ಹೆಚ್ಚಳದ ನೆಪ ಹೇಳಿ ಮೊಟ್ಟೆ ವಿತರಿಸಿಲ್ಲ
ಈ ವೇಳೆ ಮುಖ್ಯೋಪಾಧ್ಯಾಯರು ತಪ್ಪಾಯ್ತು ಸರ್ ಎಂದು ಕ್ಷಮೆ ಕೇಳಿದ್ದಾರೆ. ಮುಖ್ಯೋಪಾಧ್ಯಾಯರು ದರ ಹೆಚ್ಚಳದ ನೆಪ ಹೇಳಿ ಮೊಟ್ಟೆ ವಿತರಿಸಿಲ್ಲ ಎಂಬುದು ತಿಳಿದುಬಂದಿದ್ದು, ಇದರಿಂದ ಮೊಟ್ಟೆ ಹಣವನ್ನು ಗುಳುಂ ಮಾಡಿದ್ರಾ? ಎನ್ನುವ ಅನುಮಾನ ಮೂಡಿದೆ.
ಬಂಡಿಹರ್ಲಾಪುರ ಗ್ರಾಮದ ಶಾಲೆಯ ವಿರುದ್ಧವೂ ಆರೋಪ
ಇದೇ ರೀತಿಯ ಆರೋಪ ಬಂಡಿಹರ್ಲಾಪುರ ಗ್ರಾಮದ ಶಾಲೆಯ ವಿರುದ್ಧವೂ ಕೇಳಿಬಂದಿದೆ. ಜನವರಿ 2ನೇ ತಾರೀಖು ತಹಶೀಲ್ದಾರರು ಬಂಡಿಹರ್ಲಾಪುರ ಗ್ರಾಮದ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿಯ ಶಾಲಾ ಶಿಕ್ಷಕರು ಸಹ ಮಕ್ಕಳಿಗೆ ವಿತರಿಸಿರಲಿಲ್ಲ ಎಂದು ಹೇಳಲಾಗಿದೆ.