ಬೆಳಗಾವಿ:ಆತ ಬರ್ತ್ ಡೇ ಪಾರ್ಟಿ ಮುಗಿಸಿಕೊಂಡು ಮನೆಗೆ ಬರ್ತಾ ಇದ್ದ. ಬರೋ ದಾರಿ ಮದ್ಯ ತನ್ನ ವಿರೋಧಿಗಳ ಮನೆಯ ಮುಂದೆ ಜೋರಾಗಿ ಕೂರು ಹಾಕಿದ್ದಾನೆ. ಅಷ್ಟಕ್ಕೇ ಆತನನ್ನು ಹಿಡಿದು ತೀವ್ರವಾಗಿ ಹಲ್ಲೆ ಮಾಡಲಾಗಿದೆ. ರಾತ್ರಿ ಹಲ್ಲೆ ಮಾಡಿ ಸುಮ್ಮನಾಗದ ದುಷ್ಕರ್ಮಿಗಳು ಮತ್ತೆ ಬೆಳಗ್ಗೆ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿ ಮೃತಪಟ್ಟಿದ್ದು, ಸದ್ಯ ಕೇಸ್ ದಾಖಲಾಗಿದೆ.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ನಿವಾಸಿ ಮುತ್ತಣ್ಣ ಗುಡಬಲಿ (22) ಎರಡು ದಿನಗಳ ಹಿಂದೆ ಸ್ನೇಹಿತ ಬರ್ತ್ ಡೇ ಪಾರ್ಟಿಗೆ ಎಂದು ಹೋಗಿದ್ದನು. ಮದ್ಯರಾತ್ರಿ ಪಾರ್ಟಿ ಮುಗಿಸಿ ಮನೆಗೆ ಬರೋವಾಗ ಇದೇ ಗ್ರಾಮದ ಇಬ್ಬರ ಮನೆ ಮುಂದೆ ಜೋರಾಗಿ ಕೂಗು ಹಾಕಿದ್ದಾನೆ. ಅಷ್ಟಕ್ಕೆ ಜಗಳ ಆರಂಭವಾಗಿದೆ. ಇದೇ ಗ್ರಾಮದ ಮಹೇಶ ನಾರಿ, ಸಿದ್ದಪ್ಪ ಮುತ್ತಣ್ಣವರ್ ಹಾಗೂ ವಿಶಾಲ್ ಎನ್ನುವ ಯುವಕರು ಗುಂಪು ಕಟ್ಟಿಕೊಂಡು ಮುತ್ತಣ್ಣನ ಮೇಲೆ ಹಲ್ಲೆ ಮಾಡಿದ್ದಾರೆ. ರಾತ್ರಿ ಕೆಲವರು ಬಂದು ಜಗಳ ಬಿಡಿಸಿದ್ದು, ಬೆಳಗ್ಗೆ ಮತ್ತೆ ಮುತ್ತಣ್ಣ ಮನೆಗೆ ನುಗ್ಗಿದ ಯುವಕರು ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮುತ್ತಣ್ಣನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಗಾಯ ತೀವ್ರವಾಗಿ ರಕ್ತಸ್ರಾವ ವಾದ ಹಿನ್ನೆಲೆಯಲ್ಲಿ ಕೆಎಲ್ಇ ದಾಖಲು ಮಾಡಲಾಗಿತ್ತು.
ಗಾಯಾಳು ಮುತ್ತಣ್ಣ ಗುಡಬಲಿ ತೀವ್ರವಾಗಿ ಗಾಯಗೊಂಡಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮುತ್ತಣ್ಣ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಇನ್ನೂ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸದ್ಯ ಕೊಲೆ ಪ್ರಕರಣ ಎಂದು ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಮುಖ್ಯ ಆರೋಪಿ ಮಹೇಶ ನಾರಿ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ವಿಶಾಲ್ ನಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಗೆ ದೇಹದ ಮೇಲೆ ಗಾಯವಾಗಿದ್ದು, ಚಿಕಿತ್ಸೆ ಬಳಿಕ ಆತನನ್ನು ಸಹ ಬಂಧಿಸುತ್ತೇವೆ. ಬಳಿಕ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುತ್ತೇನೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇತ್ತೀಚಿಗೆ ಸಣ್ಣ ಸಣ್ಣ ವಿಚಾರಕ್ಕೆ ಚಾಕು ಇರಿತ ಸಾಮಾನ್ಯವಾಗಿದ್ದು, ಇದನ್ನು ತಡೆಯಲು ಪೊಲೀಸರು ಇತ್ತೀಚಿಗೆ ನಗರದಲ್ಲಿ ಒಂದು ಕಾರ್ಯಾಚರಣೆ ನಡೆಸಿದ್ರು. ಈ ವೇಳೆಯಲ್ಲಿ ಯಾರ ಬಳಿ ಚಾಕು ಇರೋದು ಕಂಡು ಬಂದ್ರೆ ರೌಡಿ ಶೀಟರ್ ಓಪನ್ ಮಾಡೋ ಎಚ್ಚರಿಕೆ ನೀಡಿದ್ರು. ಇದಾದ ಬಳಿಕ ಚಾಕು ಇಟ್ಟುಕೊಂಡು ಓಡಾಡೋವರು ಬೆಚ್ಚಿ ಬಿದಿದ್ರು. ಈ ಕಾರ್ಯಾಚರಣೆ ಮತ್ತೆ ಮುಂದುವರಿಸುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿದೆ ಮನೆಯ ಮುಂದೆ ಜೋರಾಗಿ ಕೂಗು ಹಾಕಿದ ಕಾರಣಕ್ಕೆ ಯುವಕನ ಕೊಲೆ ಮಾಡಿಲಾಗಿದ್ದು, ಆರೋಪಿಗಳು ಹಾಗೂ ಕೊಲೆಯಾದ ಯುವಕ ನಡುವೆ ಏನಾದ್ರು ವೈಯಕ್ತಿಕ ಧ್ವೇಷ ಇತ್ತಾ ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.