Thursday, October 16, 2025
Google search engine
Homeಜಿಲ್ಲಾಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ
spot_img

ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

ಬೆಳಗಾವಿ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಬೆಳಗಾವಿಯಲ್ಲಿ ಖಾಸಭಾಗದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಖಾಸಬಾಗದ ಜೋಶಿ ಮಾಳದ‌ ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಕೂಡಿಕೊಂಡು ಬೆಳಿಗ್ಗೆ 9 ಗಂಟೆ ಸುಮಾರಿಗೆ ವಿಷ ಸೇವಿಸಿದ್ದಾರೆ. ಇದರಲ್ಲಿ ಮೂವರು ಸಾವನ್ನಪ್ಪಿದ್ದು ಓರ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳಾ ಕುರಡೇಕರ್ (70) ಇವರ ಪುತ್ರ ಸಂತೋಷ ಕುರಡೇಕರ್ (44), ಪುತ್ರಿ ಸುವರ್ಣ ಕುರಡೇಕರ್(42) ಮೃತ ದುರ್ದೈವಿಗಳು. ಇನ್ನೊಬ್ಬ ಪುತ್ರಿ ಸುನಂದಾ  ಕುರಡೇಕರ್ (20) ಅವರೂ ವಿಷ ಸೇವಿಸಿದ್ದು ಅವರ ಸ್ಥಿತಿ ‌ಚಿಂತಾ ಜನಕ‌ವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರೂ ಮಕ್ಕಳ‌ ಮದುವೆ ಆಗಿರಲಿಲ್ಲ. ಹೀಗಾಗಿ, ತಾಯಿ‌ ಜೊತೆಗೆ ಎಲ್ಲರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

 ಡೆತ್ ನೋಟ್ ನಲ್ಲಿ ಏನಿದೆ..? ಸಂತೋಷ  ಕುರಡೇಕರ್ ಡೆತ್ ನೋಟ್ ಬರೆದಿದ್ದು, ಅದು ಮರಾಠಿ ಭಾಷೆಯಲ್ಲಿದೆ. ಅದರಲ್ಲಿ ನಾನು ಬಹಳಷ್ಟು ಜನರ ಬಳಿ ಗೋಲ್ಡ್ ಚೀಟಿ (ಚೀಟ್ ಫಂಡ್ ಮಾದರಿ) ಮಾಡುತ್ತಿದ್ದೆ. ಹಲವಾರು ಜನರಿಗೆ ಹಣ ನೀಡಬೇಕಾಗಿತ್ತು. ವಡಗಾವಿಯ ಗೋಲ್ಡ್ ಸ್ಮೀತ್ ರಾಜು ಕುಡತಲಕರ್ ಕಿರುಕುಳ ಕೊಟ್ಟಿದ್ದಾರೆ. ಅವರ ಬಳಿ 500 ಗ್ರಾಂ ಬಂಗಾರ ಕೊಟ್ಟಿದ್ದೇನೆ. ಮರಳಿ ಕೇಳಿದರೆ ಅವನ ಹೆಂಡತಿ ‌ಹಾಗು ಅವನು ಸೇರಿ ಜೀವ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ನಾನು ಬಂಗಾರವನ್ನು ತೆಗೆದುಕೊಂಡು ಊರು ಬಿಟ್ಟಿದ್ದೇನೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನ ಹರಾಜು ಮಾಡಿದ್ದಾರೆ. ಇದರಿಂದ ನನಗೆ ಬದುಕಲು ಕಷ್ಟವಾಗಿದೆ. ಹಲವಾರು ಜನ ನನ್ನ ಮನೆಗೆ ಬಂದು ಟಾರ್ಚರ್ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪೊಲೀಸರು ರಾಜು ಕುಡತಲಕರ್ ಅವರಿಂದ ಚಿನ್ನವನ್ನು ಪಡೆದುಕೊಂಡು ನಾನು ಕೊಡಬೇಕಾದ ಜನರಿಗೆ ನೀಡಬೇಕು. ಅದೇ ರೀತಿ ರಾಜು ಕುಡತಲಕರ್ ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯರಾದ ಅಂಜನಾ ರಾಯ್ಕರ್ ಮಾತನಾಡಿ, ಕಳೆದ 15 ವರ್ಷಗಳಿಂದ ಜೋಶಿ ಮಾಳದಲ್ಲಿ ಈ ಕುಟುಂಬ ವಾಸವಿದೆ. ಅವರು ತುಂಬಾ ಒಳ್ಳೆಯವರು. ಯಾರ ಜೊತೆಯೂ ಒಂದು ದಿನವೂ ಜಗಳ ಮಾಡಿರಲಿಲ್ಲ. ನಗುನಗುತಾ ಎಲ್ಲರ ಜೊತೆಗೆ ಮಾತಾಡುತ್ತಿದ್ದರು‌. ಇಲ್ಲಿನ ಹರಿ ಮಂದಿರದಲ್ಲಿ ಒಳ್ಳೆಯ ಸೇವೆ ಸಲ್ಲಿಸುತ್ತಿದ್ದರು. ಚೀಟ್ ಫಂಡ್ ವ್ಯವಹಾರ ಮಾಡುತ್ತಿದ್ದರು. ಜನರಿಂದ ತೆಗೆದುಕೊಂಡಿದ್ದ ಬಂಗಾರ ವಾಪಸ್ಸು ಕೊಡಲು ಆಗದೇ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಮೃತ ಸಂತೋಷ ಸ್ನೇಹಿತ ಮಹೇಶ ವೆರ್ಣೇಕರ್ ಮಾತನಾಡಿ, ಸಂತೋಷ ಶಾಂತ ಸ್ವಭಾವದವ. ಬಂಗಾರ ವ್ಯವಹಾರ ಮಾಡುತ್ತಿದ್ದ. ಅದರಿಂದ ತುಂಬಾ ಸಾಲ ಆಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ ಅವರನ್ನು ಎಲ್ಲರೂ ಬಾಬು ಅಂತಾ ಕರೆಯುತ್ತಿದ್ದರು. ಬಾಬು ಮತ್ತು ಆತನ ಇಬ್ಬರು ಸಹೋದರಿಯರ ಮದುವೆ ಆಗಿರಲಿಲ್ಲ. ಸಂತೋಷ ಸಹೋದರಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು‌.

ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಪ್ರತಿಕ್ರಿಯಿಸಿದ್ದು, ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಬದುಕುಳಿದಿದ್ದಾರೆ. ಅವರ ಸ್ಥಿತಿಯೂ ಗಂಭೀರವಾಗಿದೆ. ಸ್ಥಳದಲ್ಲಿ ಡೆತ್‌ನೋಟ್‌ ಸಿಕ್ಕಿದ್ದು, ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!