ಸವದತ್ತಿ: ಅಂದಿನ ಪ್ರಧಾನಿ ಮನಮೋಹನ ಸಿಂಗ್ ಜಾರಿಗೆ ತಂದಿರುವ ನರೇಗಾ ಯೋಜನೆ ಅತ್ಯಂತ ಅದ್ಭುತವಾದ ಯೋಜನೆಯಾಗಿದ್ದು, ವಿಶ್ವದಲ್ಲೇ ಖ್ಯಾತಿಪಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಸವದತ್ತಿ ತಾಲೂಕಿನ ಶಿಂದೋಗಿ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2006ರಲ್ಲಿ ಆಗಿನ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ದುಡಿಯುವ ಕೈಗಳಿಗೆ ಉದ್ಯೋಗ ಕೊಡಬೇಕೆನ್ನುವ ಉದ್ದೇಶದಿಂದ ಜಾರಿಗೆ ತಂದಿರುವ ಅಪರೂಪದ ಯೋಜನೆ ನರೇಗಾ. ಈ ಯೋಜನೆ ವಿಶ್ವದಲ್ಲೇ ಪ್ರಖ್ಯಾತಿ ಪಡೆದಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಕೆಲಸ ಮಾಡಲು ಅವಕಾಶವಿದೆ. ಆದರೆ ನಗರ ಪ್ರದೇಶದಲ್ಲಿ ಮಾಡಲು ಅವಕಾಶವಿಲ್ಲ. ಇದನ್ನು ಸದುಪಯೋಗಪಡಿಸಿಕೊಂಡು, ಶಿಂದೋಗಿ ಗ್ರಾಮ ಪಂಚಾಯಿತಿ ಜಾರಿಗೊಳಿಸಿರುವ ಯೋಜನೆಗಳನ್ನು ನೋಡಿಕೊಂಡು ಇತರರೂ ಕೆಲಸ ಮಾಡಲಿ ಎಂದು ಅವರು ಸಲಹೆ ನೀಡಿದರು.
ಮುಕ್ತಿಧಾಮ, ಘನತ್ಯಾಜ್ಯ ವಿಲೇವಾರಿ ಘಟಕ, ಗ್ರಾಮ ಪಂಚಾಯಿತಿ ಕಟ್ಟಡ, ಸರಕಾರಿ ಪ್ರೌಢ ಶಾಲೆ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಏನೇನು ಮಾಡಬಹುದು ಎನ್ನುವುದಕ್ಕೆ ಇಂದಿನ ಕಾರ್ಯಕರ್ಮಗಳೇ ಉದಾಹರಣೆ. ಕ್ರಿಯಾಶೀಲ ಶಾಸಕ ವಿಶ್ವಾಸ ವೈದ್ಯ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮುಂದಾಳತ್ವದಲ್ಲಿ ಸವದತ್ತಿ ಯಲ್ಲಮ್ಮ ಶಕ್ತಿ ಕೇಂದ್ರ ಪ್ರಾಧಿಕಾರವಾಗಿ ಪರಿವರ್ತನೆಯಾಗಿದೆ. ಹಿಂದುಳಿದಿರುವ ಸವದತ್ತಿ ತಾಲೂಕು ಮುಂಬರುವ ದಿನಗಳಲ್ಲಿ ಅಭಿವೃದ್ಧಿಯಾಗಲಿ. ಇದಕ್ಕೆ ನನ್ನಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಚನ್ನರಾಜ ಹಟ್ಟಿಹೊಳಿ ಭರವಸೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುನವಳ್ಳಿ ಸೋಮಶೇಖರ ಮಠದ ಶ್ರೀ ಮ.ನಿ.ಪ್ರ.ಸ್ವ ಮುರುಘೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಡಿ.ಟೋಪೋಜಿ, ಕಾಂಗ್ರೆಸ್ ಮುಖಂಡ ಕಿರಣ ಸಾಧುನವರ, ರವಿ ಯಲಿಗಾರ, ಗ್ರಾಮ ಪಂಚಾಯತ್ ನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.