ಬೆಳಗಾವಿ: ದೇಶಕ್ಕೆ ಮಾರಕವಾಗಿರುವ ಉಗ್ರರನ್ನು ಮಟ್ಟಹಾಕಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಉಗ್ರರನ್ನು ಸದೆ ಬಡಿಯಲು ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡರೂ ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮೆಹಲ್ಗಾವ್ ನಲ್ಲಿ ಉಗ್ರರದಾಳಿಯನ್ನು ಇಡೀ ದೇಶ ಒಗ್ಗಟ್ಟಾಗಿ ವಿರೋದಿಸುತ್ತದೆ. ಯಾವುದೇ ಪಕ್ಷ, ಸರ್ಕಾರ ಇರಲಿ, ಎಲ್ಲರೂ ಒಟ್ಟಾಗಿ ಉಗ್ರರನ್ನು ಮೆಟ್ಟಿ ನಿಲ್ಲಬೇಕಿದೆ ಎಂದರು.
ಭದ್ರತಾ ವೈಫಲ್ಯದ ಬಗ್ಗೆ ನಾನು ಮಾತನಾಡುವುದಿಲ್ಲ. ನಾವೆಲ್ಲರೂ ಭಾರತೀಯರು ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಉಗ್ರರನ್ನು ಮಟ್ಟಹಾಕುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ನಮ್ಮ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಹಾಗಾಗಿ, ಮುಖ್ಯಮಂತ್ರಿ ಆದಿಯಾಗಿ ನಾವೆಲ್ಲರೂ ಕೇಂದ್ರದ ಜೊತೆಗೆ ನಿಲ್ಲುತ್ತೇವೆ. ಉಗ್ರರನ್ನು ಮಟ್ಟ ಹಾಕುವುದೇ ನಮ್ಮೆಲ್ಲರ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಅಮಾಯಕರಿಗೆ ವಂಚಿಸುತ್ತಿರುವುದು ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಖುದ್ದು ನಾನೇ ದೂರು ನೀಡಿದ್ದೇನೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಇದಕ್ಕೂ ಮೊದಲು ಬೆಳಗಾವಿ ತಾಲ್ಲೂಕಿನ ಯಳ್ಳೂರಿನಲ್ಲಿ ಸ್ಥಳೀಯ ಮರಾಠಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ರಾಷ್ಟ್ರೀಯ ನಾಯಕ ಮಹಾರಾಷ್ಟ್ರದ ಶರದ್ ಪವಾರ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದರು.
2013ರಲ್ಲಿ ಮೊದಲ ಬಾರಿಗೆ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಸಂದರ್ಭದಲ್ಲೇ ಬಾರಾಮತಿ ಮಾದರಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆನ್ನುವ ಕನಸು ಹೊತ್ತಿದ್ದೆ. ಅದೇ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದಿರುವ ನನ್ನಂತವರಿಗೆ ಶರದ್ ಪವಾರ ಅವರು ಆದರ್ಶರಾಗಿದ್ದಾರೆ. ಅವರಿಂದ ಬಹಳಷ್ಟು ಕಲಿತಿದ್ದೇನೆ. ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ಶಿವಾಜಿ ಪುತ್ಥಳಿ ಸ್ಥಾಪಿಸಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎಂದು ಶರದ್ ಪವಾರ್ ಅವರಲ್ಲಿ ವಿನಂತಿಸಿದರು.
ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ಆದರೆ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಾತಂತ್ರ್ಯ ಪೂರ್ವದಿಂದಲೇ ಶಿಕ್ಷಣ ಸೇವೆ ನೀಡುವ ಮಹತ್ವದ ಕೆಲಸವನ್ನು ಮಾಡುತ್ತ ಬಂದಿದೆ. ಇದು ಕೇವಲ ಶಾಲೆಯಲ್ಲ, ಇದೊಂದು ವಿದ್ಯಾ ಮಂದಿರ. ಇಲ್ಲಿ ಕಲಿತ ಹಲವರು ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣ ಅವಕಾಶ ನನಗೆ ಸಿಕ್ಕಿದ್ದು ನನ್ನ ಸುದೈವ ಎಂದು ಹೆಬ್ಬಾಳ್ಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾಜಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಾಣಿಕರಾವ್ ಸಾಳುಂಕೆ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ್ ಕೋರೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ವಿಠ್ಠಲ ಹಲಗೇಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅರವಿಂದ ಪಾಟೀಲ, ರಾವಜಿ ಪಾಟೀಲ, ಎನ್.ಡಿ.ಗೋರೆ, ಸತೀಶ್ ಪಾಟೀಲ ಸೇರಿ ಮತ್ತಿತರರು ಇದ್ದರು.