ಬೆಳಗಾವಿ: ಬೆಳಗಾವಿಯ ಪಿಜಿಯೊಂದರಲ್ಲಿ ಎಂಬಿಎ ಪದವಿ ಪದವೀಧರ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ
ಶರಣಾದ ಘಟನೆ ನಡೆದಿದೆ. ಯುವತಿ ಆತ್ಮಹತ್ಯೆಗೆ ಲವ್ ಬ್ರೇಕಪ್ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಬೆಳಗಾವಿಯ ನೆಹರೂ ನಗರದ ಪಿಜಿಯಲ್ಲಿ ನೇಣುಬೀಗಿಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಜಯಪುರ ಜಿಲ್ಲೆಯ ಐಶ್ವರ್ಯಲಕ್ಷ್ಮೀ ಗಲಗಲಿ ಮೃತ ಯುವತಿ.
ವಿಜಯಪುರದಲ್ಲಿಯೇ ಎಂಬಿಎ ಪದವಿ ಪೂರ್ಣಗೊಳಿಸಿದ್ದ ಐಶ್ವರ್ಯಲಕ್ಷ್ಮೀ ಕೆಲಸಕ್ಕಾಗಿ ಬೆಳಗಾವಿಗೆ ಬಂದಿದ್ದರು. ಕಳೆದ ಮೂರು ತಿಂಗಳಿನಿಂದ ಬೆಳಗಾವಿಯ ಸಾಯಿಕೃಪಾ ಪಿಜಿಯಲ್ಲಿ ವಾಸವಿದ್ದರು. ಬೆಳಗಾವಿಯ ಏಕಸ್ ಕಂಪನಿಯಲ್ಲಿ ಕಲಿಕಾ ತರಬೇತಿ ಅವಧಿಯಲ್ಲಿದ್ದರು. ಮಂಗಳವಾರ ಸಂಜೆ 6.30 ರಿಂದ 7.30 ರ ಅವಧಿಯಲ್ಲಿ ಐಶ್ವರ್ಯ ಪಿಜಿಯಲ್ಲೆ ನೇಣು ಹಾಕಿಕೊಂಡಿದ್ದಾರೆ.
ಸ್ನೇಹಿತನೊಂದಿಗೆ ಪೋನ್ ನಲ್ಲಿ ಮಾತನಾಡಿದ್ದ ಐಶ್ವರ್ಯಲಕ್ಷ್ಮೀ ಕಾಲ್ ಕಟ್ ಮಾಡಿದ್ದರು. ಬಳಿಕ ಪೋನ್ ರಿಸೀವ್ ಮಾಡದಿದ್ದಕ್ಕೆ ಪಿಜಿಗೆ ಗಾಬರಿಯಿಂದ ಸ್ನೇಹಿತ ಓಡಿ ಬಂದಿದ್ದ. ಪಿಜಿ ರೂಮ್ ಬಾಗಿ ಒಡೆದು ನೋಡಿದಾಗ ಐಶ್ವರ್ಯಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿದ್ದು ಬೆಳಕಿಗೆ ಬಂದಿದೆ.
ಐಶ್ವರ್ಯಲಕ್ಷ್ಮೀ ಸ್ನೇಹಿತ ಅಲ್ಲಿಂದ ವಾಪಸ್ ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ. ಅಲ್ಲದೇ ಸಿಸಿಟಿವಿಯಲ್ಲಿ ಐಶ್ವರ್ಯಲಕ್ಷ್ಮೀ ಸ್ನೇಹಿತ ಪಿಜಿಗೆ ಬರುವ ದೃಶ್ಯ ಸೆರೆಯಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಐಶ್ವರ್ಯಲಕ್ಷ್ಮೀ ಮೊಬೈಲ್ ಕಾಲ್ ಡಿಟೈಲ್ಸ್ ಪರಿಶೀಲಿಸಿದ್ದಾರೆ. ಪಿಜಿಗೆ ಬಂದು ಹೋದ ಸ್ನೇಹಿತನ ಬಗ್ಗೆಯೂ ಶೋಧ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಯುವತಿ ಆತ್ಮಹತ್ಯೆಗೆ ಅಸಲಿ ಕಾರಣ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.