“ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ.!
ಬೆಳಗಾವಿ: ಜಾರಕಿಹೊಳಿ ಕುಟುಂಬಸ್ಥರು ಈಗಾಗಲೇ ರಾಜಕೀಯದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿದ್ದಾರೆ. ಸತೀಶ್, ರಮೇಶ್, ಬಾಲಚಂದ್ರ, ಲಖನ್ ಜಾರಕಿಹೊಳಿ ಸಹೋದರರು ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ. ಇದೀಗ ಇವರ ಕುಟುಂಬದ ಮತ್ತೊಂದು ಕುಡಿ ಪಾಲಿಟಿಕ್ಸ್ಗೆ ಎಂಟ್ರಿಯಾಗಿದೆ.
ಹೌದು…ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆ ಆಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದು, ಈಗ ಸತೀಶ್ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
ರಾಹುಲ್ ಜಾರಕಿಹೊಳಿ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಸದ್ಯ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಇವರು ಕೂಡ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಇನ್ನು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ರಾಹುಲ್ ಅವರು ನಿರುದ್ಯೋಗಿ ಯುವಕರಿಗೆ ಘಟಪ್ರಭಾದ ಕಾಂಗ್ರೆಸ್ ಸೇವಾದಳದ ತರಬೇತಿ ಕೇಂದ್ರದಲ್ಲಿ ಪೊಲೀಸ್ ಹಾಗೂ ಸೇನಾ ತರಬೇತಿಯನ್ನು ಉಚಿತ ಶಿಬಿರ ನಡೆಸುವ ಮೂಲಕ ನಿರುದ್ಯೋಗಿಗಳ ಪಾಲಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.
ಸಚಿವ ಸತೀಶ್ ಕಿವಿಮಾತು:
ರಾಜಕೀಯದಲ್ಲಿ ತೊಡಗಿಸಿಕೊಳ್ಳುವವರು ಮೊದಲು ಸಮಾಜ, ಸಮಾಜಸೇವೆ ಹಾಗೂ ಪಕ್ಷ ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಇದನ್ನು ಅರಿತಾಗ ಮಾತ್ರ ಅವರು ಯಶಸ್ವಿಯಾಗಲು ಸಾಧ್ಯ. ರಾಹುಲ್ ತಮಗೆ ಅವಕಾಶವಿರುವಲ್ಲಿ ಹಾಗೂ ಎಲ್ಲಿ ಜನ ತಮ್ಮ ಸೇವೆ ಬಯಸುತ್ತಾರೋ ಅಲ್ಲೆಲ್ಲಾ ಹೋಗಿ ಸೇವೆ ಮಾಡಬೇಕು. ಜೊತೆಗೆ ಪಕ್ಷವನ್ನು ಬಲಪಡಿಸಬೇಕು. ಹಿರಿಯರು, ಕಿರಿಯರೊಂದಿಗೆ ಬೆರೆತು ಅವರು ಕೊಡುವ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ತಮ್ಮ ವಿಚಾರಗಳನ್ನು ಅವರಿಗೆ ತಿಳಿಸಬೇಕು. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ರಾಹುಲ್ ಜಾರಕಿಹೊಳಿ ಅವರಿಗೆ ಅವರ ತಂದೆ ಸತೀಶ್ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ.
ರಾಷ್ಟ್ರ-ರಾಜ್ಯ ರಾಜಕಾರಣಕ್ಕೆ ಜಾರಕಿಹೊಳಿ ಕುಟುಂಬ:
ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಸಚಿವರಾಗುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಹಿಡಿತ ಸಾಧಿಸಿದೆ. ಈಗಾಗಲೇ ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರು ಸಕ್ರಿಯ ರಾಜಕಾರಣದಲ್ಲಿದ್ದಾರೆ.
ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ ರಮೇಶ ಜಾರಕಿಹೊಳಿ ಗೋಕಾಕ ಶಾಸಕರಾಗಿದ್ದರೆ, ಸತೀಶ ಜಾರಕಿಹೊಳಿ ಹಾಲಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅರಭಾವಿ ಶಾಸಕರಾಗಿದ್ದು, ಲಖನ್ ಜಾರಕಿಹೊಳಿ ಪರಿಷತ್ ಸದಸ್ಯರಾಗಿದ್ದಾರೆ.
ಇನ್ನುಳಿದಂತೆ ಭೀಮಶಿ ಜಾರಕಿಹೊಳಿ ಸಕ್ರಿಯ ರಾಜಕಾರಣದಲ್ಲಿ ಇರದಿದ್ದರೂ, ಸಹೋದರರ ಬೆನ್ನಿಗಿದ್ದಾರೆ. ಈ ಎಲ್ಲರೂ ರಾಜ್ಯರಾಜಕಾರಣದಲ್ಲಿದ್ದು, ರಾಷ್ಟ್ರ ರಾಜಕಾರಣಕ್ಕೂ ಸಚಿವ ಸತೀಶ್ ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರು ಈಗಾಗಲೇ ಕಾಲಿಟ್ಟಿದ್ದು, ಈಗ ಅವರ ಸಹೋದರ ರಾಹುಲ್ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.
ಮಾಸ್ಟರ್ ಮೈಂಡ್ ಎನ್ನುವುದನ್ನು ಸಾಬೀತು ಪಡೆಸಿದ ಸಾಹುಕಾರ್:
ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು ಜನಜನಿತ. ಅತ್ಯಂತ ಸರಳ ಸಜ್ಜನ ರಾಜಕಾರಣಿಯಾಗಿ ಸತೀಶ ಜಾರಕಿಹೊಳಿ ಅವರು ದಿನೇ ದಿನೇ ರಾಜ್ಯ ರಾಜಕಾರಣದಲ್ಲಿ ಮೇಲಕ್ಕೆ ಏರುತ್ತಿರುವುದು ವಿಶೇಷವಾಗಿದೆ. ಈ ಬಾರಿಯ ನಡೆದ ಲೋಕ ಚುನಾವಣೆಯಲ್ಲಿ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಗೆ ನಡೆದ ಚುನಾವಣೆಯಲ್ಲಿ ಅವರು ತಾವೊಬ್ಬ ಮಾಸ್ಟರ್ ಮೈಂಡ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಒಟ್ಟಾರೆ ಗಮನಿಸುವುದಾದರೆ ರಾಹುಲ್ ಜಾರಕಿಹೊಳಿ ಅವರು ತಮ್ಮ ತಂದೆ ಸತೀಶ ಜಾರಕಿಹೊಳಿ ಅವರ ನೆರಳಿನಂತೆ ಸಾಗುತ್ತಿದ್ದು, ಈಗ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಆಯ್ಕೆಯಾಗಿದ್ದಾರೆ.ಅತ್ಯಂತ ಸಣ್ಣ ವಯಸ್ಸಿನಲ್ಲೇ ಸೇವಾ ಮನೋಭಾವ ಅಳವಡಿಸಿಕೊಂಡು ರಾಜಕೀಯದಲ್ಲಿ ಮುನ್ನುಗುತ್ತಿರುವ ರಾಹುಲ್ ಜಾರಕಿಹೊಳಿಯವರ ಭವಿಷ್ಯ ಉಜ್ವಲವಾಗಿ ಸಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.”