ಬೆಳಗಾವಿ: ಮೊನ್ನೆಯಷ್ಟೇ ಬೆಳಗಾವಿಯಲ್ಲಿ ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ, ಮುಸುಕುಧಾರಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ವೇಳೆ ಓರ್ವ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಪತ್ತೆಗೆ ಇದೀಗ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ.
ಪುದುಚೇರಿ-ದಾದರ್ (ಚಾಲುಕ್ಯ ಎಕ್ಸ್‌ಪ್ರೆಸ್)ರೈಲಿನಲ್ಲಿ ಲೊಂಡಾ ಬಳಿ ಕೋಚ್ ಅಟೆಂಡರ್ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದರು. ಟಿಕೆಟ್ ಚೆಕ್ ಮಾಡಲು ಬಂದ ಟಿಸಿ ಮೇಲೆ ಮುಸುಕುಧಾರಿ ಯುವಕನೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆತನನ್ನು ರಕ್ಷಿಸಲು ಹೋದ ಐವರ ಮೇಲೂ ಮುಸುಕುಧಾರಿ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಈ ವೇಳೆ ಓರ್ವ ಉತ್ತರ ಪ್ರದೇಶ ಮೂಲದ ಗ್ರುಪ್ ಡಿ ನೌಕರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರು ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹತ್ಯೆಗೀಡಾದ ಯುವಕ ದೇವರ್ಷಿ ವರ್ಮಾ (24) ಎಂದು ಗುರುತಿಸಲಾಗಿತ್ತು.
ಇನ್ನು ಆರೋಪಿಯ ಬೆನ್ನತ್ತಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ ಮತ್ತು ಖಾನಾಪುರ ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೆತ್ತಿಕೊಂಡು ಆರೋಪಿಯ ರೇಖಾಚಿತ್ರ ಮತ್ತು ಫೋಟೋ ಬಿಡುಗಡೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹುಬ್ಬೇರಿಸಿದ ಪೊಲೀಸರ ನಡೆ: ಲೊಂಡಾ ಬಳಿ ರೈಲಿನಲ್ಲಿ ಕೊಲೆಯಾಗಿದ್ದು, ರೈಲು ಖಾನಾಪುರವರೆಗೆ ಸುಮಾರು 40 ನಿಮಿಷ ಪ್ರಯಾಣಿಸಿದೆ. ರೈಲಿನಲ್ಲೇ ಕೊಲೆಗಾರ ಪ್ರಯಾಣ ಮಾಡಿದ್ದು, ಮುಂದಿನ ನಿಲ್ದಾಣ ಖಾನಾಪುರದಲ್ಲಿ ಇಳಿದು ಹೋಗಿದ್ದಾನೆ. ಆಗ ಅಲ್ಲಿನ ಸ್ಥಳೀಯ ಪೊಲೀಸರಿಗೆ ಕೊಲೆಗಾರನನ್ನು ವಶಕ್ಕೆ ಪಡೆಯಲು ಆಗಿಲ್ಲ.
ನಮಗೆ ಯಾರೂ ಮಾಹಿತಿ ಕೊಟ್ಟಿಲ್ಲ ಎಂದು ಜಿಲ್ಲಾ ಪೊಲೀಸರು ಹೇಳುತ್ತಿದ್ದಾರೆ. ರಾಜ್ಯ ರೈಲ್ವೇ ಪೊಲೀಸರು, ರೈಲು ಸುರಕ್ಷಾ ದಳ, ರೈಲು ನಿರ್ವಹಣಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬುವುದು ಸ್ಪಷ್ಠಗೊಂಡಿಲ್ಲ. ಜಿಲ್ಲಾ ಪೊಲೀಸ್ ಸೇರಿ, ಮೂರು ಭದ್ರತಾ ಪಡೆಗಳ ಬೇಜವಾಬ್ದಾರಿಯಿಂದ ಕೊಲೆಗಾರ ತಪ್ಪಿಸಿಕೊಂಡಿದ್ದಾನೆ ಎನ್ನುವ ಆಕ್ರೋಶಗಳು ಭಗಿಲೆದ್ದಿವೆ.”