ಬೆಳಗಾವಿ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಪಾಲಕರ ವೇತನ ಪಾವತಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಅನ್ವಯವಾಗಲಿದೆ. ಬಯೋಮೆಟ್ರಿಕ್ ಹಾಜರಾತಿ ವರದಿಯ ಆಧಾರಿತ ವೇತನ ಪಾವತಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.
ನಿಗದಿತ ದಿನಾಂಕದಂದು ಗ್ರಂಥಪಾಲಕರ ವೇತನ ಪಾವತಿಯನ್ನು ಪಾವತಿವಸುವ ಕುರಿತು ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಸೋಮವಾರ (ಸೆ.02) ಗ್ರಂಥಪಾಲಕರ ಅಸೋಸಿಯೇಶನ್ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಂಥಪಾಲಕರು ಗ್ರಂಥಾಲಯದ ವೇಳೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು.
ಗ್ರಂಥಪಾಲಕರು ಪಾವತಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಎಲ್ಲ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಹಾಗೂ ಗ್ರಂಥ ಪಾಲಕರಿಗೆ ಬಯೋಮೆಟ್ರಿಕ್ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಬಯೋಮೆಟ್ರಿಕ್ ಆಧರಿಸಿ ವೇತನ ಪಾವತಿಸಲು ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳಿಂದ ಸೂಚಿಸಲಾಗಿದೆ. ಹಾಗಾಗಿ ಗ್ರಂಥಪಾಲಕರಿಗೆ ಗ್ರಂಥಾಲಯದ ಬಯೋಮೆಟ್ರಿಕ್ ಅಳವಡಿಸಲಾಗಿದೆ.
ಗ್ರಂಥಾಲಯದ ಸ್ವಚ್ಚತೆ, ಬುಕ್ಸ್ ಸ್ಟಾಕ್ ಸಂಗ್ರಹಣೆ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು. ಅಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಿ, ಜನಪ್ರತಿನಿಧಿಯಾಗಿ ಉದಾರಣೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಗ್ರಂಥಪಾಲಕರು ಗ್ರಂಥಾಲಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಜಿ.ಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಂಥಪಾಲಕ ಅಸೋಸಿಯೇಶನ್ ಸದಸ್ಯರು, ಎಲ್ಲ ತಾಲೂಕುಗಳಿಂದ ಆಗಮಿಸಿದ ಗ್ರಂಥಪಾಲಕರು ಹಾಜರಿದ್ದರು.
***