ಸಿನಿಮಾ ಸುದ್ದಿ:ಶರಣ್ ನಟನೆಯ ಎರಡು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲಿವೆ. “ಅವತಾರ್ ಪುರುಷ-2′ ಹಾಗೂ “ಛೂ ಮಂತರ್’ ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಿಸಿವೆ.
ಏಪ್ರಿಲ್ 5ಕ್ಕೆ ಛೂ ಮಂತರ್
ಶರಣ್ ನಟನೆಯ “ಛೂ ಮಂತರ್’ ಈಗ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಏಪ್ರಿಲ್ 5ಕ್ಕೆ ಚಿತ್ರ ತೆರೆಗೆ ಬರಲಿದೆ. ಶರಣ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. “ಕರ್ವ’ ನವನೀತ್ ನಿರ್ದೇಶನ ಈ ಚಿತ್ರಕ್ಕಿದ್ದು, ಈಗಾಗಲೇ ಚಿತ್ರದ ಚಿತ್ರದ ಫಸ್ಟ್‌ಲುಕ್, ಮೋಶನ್ ಪೋಸ್ಟರ್ ಹಾಗೂ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ.
“ಛೂ ಮಂತರ್’ ಮೇಲೆ ನಿರ್ದೇಶಕ ನವನೀತ್ ಕೂಡಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನವನೀತ್, “”ಛೂ ಮಂತರ್ ಇದೊಂದು ಫ್ಯಾನ್ಸಿ ಲೋಕ. ಹೈಪರ್ ಲಿಂಕ್ ಇರುವ ಮೂರು ಭಿನ್ನ ಕಥೆಗಳು ಜೊತೆಗೆ ಸಾಗುವ ಚಿತ್ರ ಇದಾಗಿದ್ದು, ನಾಯಕ ಎಲ್ಲಾ ಕಥೆಯಲ್ಲಿ ಇರುತ್ತಾನೆ. ಶರಣ್ ಅವರು ಇಲ್ಲಿವರೆಗೆ ಪೂರ್ಣ ಪ್ರಮಾಣದ ಹಾರರ್ ಸಿನಿಮಾಗಳನ್ನು ಮಾಡಿಲ್ಲ. ಇದು ಅವರ ಕೆರಿಯರ್‌ನ ಮೊದಲ ಔಟ್ ಅಂಡ್ ಔಟ್ ಹಾರರ್ ಸಿನಿಮಾ. ನಾವು ಉತ್ತರಾಖಂಡ್‌ಗೆ ತೆರಳಿ ಹಿಮದಲ್ಲಿ ಶೂಟಿಂಗ್ ಮಾಡಿದ್ದೇವೆ’ ಎಂಬುದು ನಿರ್ದೇಶಕ ನವನೀತ್ ಮಾತು.
ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ, “ಶರಣ್ ಅವರ ಜೊತೆ “ವಿಕ್ಟರಿ-2′ ಚಿತ್ರ ಮಾಡಿ ವಿಕ್ಟರಿ ಪಡೆದಿದ್ದೆ. ನಂತರ ಅವರ ಜೊತೆ ಕೆಲಸ ಮಾಡಬೇಕು ಅಂತ ಕಳೆದ ಮೂರು ವರ್ಷಗಳಿಂದ, ಹೊಸ ನಿರ್ದೇಶಕರಿಂದ ಹಿಡಿದು ಅನುಭವಿ ನಿರ್ದೇಶಕರವರೆಗೂ ಕಥೆ ಕೇಳಿಸಿದ್ದೆ. ಆದರೆ ಶರಣ್ ಚಿತ್ರಗಳ ಆಯ್ಕೆ ವಿಷಯದಲ್ಲಿ ತುಂಬಾ ಚೂಸಿಯಾಗಿದ್ದರು. ಒಳ್ಳೆ ಕಥೆ, ಪಾತ್ರ, ಭಿನ್ನತೆಯನ್ನು ಕಾಯ್ದುಕೊಳ್ಳತ್ತಿದ್ದರು. ಇವರಿಗೆ ಕಥೆ ಹೇಳಿಸಿ ಸುಸ್ತಾಗಿದ್ದೆ. ತರುಣ್ ಸುಧೀರ್ ಅವರು ಸಿಕ್ಕಾಗ ಚಿತ್ರ ಮಾಡುವ ಬಗ್ಗೆ ಕೇಳಿದ್ದೆ. ಆಗ ಅವರು ಶರಣ್ ಕೆರಿಯರ್‌ನಲ್ಲಿ ಸಂಪೂರ್ಣ ಹಾರರ್ ಚಿತ್ರ ಮಾಡಿಲ್ಲ. ಆ ಥರದ ಕಥೆ ಇದ್ದರೆ ಪ್ರಯತ್ನ ಮಾಡಿ ಅಂದರು. ನಂತರ ಬಂದಿದ್ದೇ “ಛೂ ಮಂತರ್’ ಎನ್ನುತ್ತಾರೆ.
ಚಿತ್ರದ ನಾಯಕಿ ಅದಿತಿ ಪ್ರಭುದೇವ, ಹಾಗೂ ಪ್ರಭು, ಮೇಘನಾ ಗಾಂವ್ಕರ್, ರಜಿನಿ , ಧರ್ಮ ಮುಂತಾದವರು ನಟಿಸಿದ್ದಾರೆ. ಹಾಗೆಯೇ ಚಿಕ್ಕಣ್ಣ, ಶಂಕರ್ ಅಶ್ವಥ್, ಕಿರಣ್, ವಿಜಯ್ ಚೆಂಡೂರು, ಓಂ ಪ್ರಕಾಶ್ ರಾವ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಅವಿನಾಶ್ ಹಿನ್ನಲೆ ಸಂಗೀತ, ಚಂದನ್ ಶೆಟ್ಟಿ ಸಂಗೀತ, ಅನೂಪ್ ಛಾಯಾಗ್ರಹಣವಿದೆ.
ಮಾ.22ಕ್ಕೆ ಅವತಾರ್ ಪುರುಷ-2
ಶರಣ್ “ಅವತಾರ್ ಪುರುಷ’ ಸಿನಿಮಾದಲ್ಲಿ ನಟಿಸಿದ್ದು, ಮೊದಲ ಭಾಗ ಬಿಡುಗಡೆಯಾಗಿದ್ದು ನಿಮಗೆ ಗೊತ್ತಿರಬಹುದು. ಈಗ ಅದರ ಮುಂದುವರೆದ ಭಾಗ ಬಿಡುಗಡೆಯ ಹಂತಕ್ಕೆ ಬಂದಿದೆ. ಹೌದು, “ಅವತಾರ್ ಪುರುಷ-2′ ಚಿತ್ರ ಮಾ.22ರಂದು ತೆರೆಕಾಣಲಿದೆ. ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದು, ಪುಷ್ಕರ್ ನಿರ್ಮಾಣ ಮಾಡಿದ್ದಾರೆ.
ವಿಭಿನ್ನ ಕಥಾಹಂದರವೊಂದಿರುವ ಈ ಚಿತ್ರದ ಮೊದಲ ಭಾಗಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಎರಡನೇ ಭಾಗದ ಮೇಲೆ ಇಡೀ ತಂಡ ನಿರೀಕ್ಷೆ ಇಟ್ಟಿದೆ. ಮೊದಲ ಭಾಗದ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ ಎಂಬ ಕುತೂಹಲದೊಂದಿಗೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಾನೆ ಎಂಬ ವಿಶ್ವಾಸ ಕೂಡಾ ಚಿತ್ರತಂಡಕ್ಕಿದೆ. ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿ. ಸೂಪರ್ ನ್ಯಾಚುರಲ್ ಕಾಮಿಡಿ ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿ ಸಾಯಿಕುಮಾರ್, ಭವ್ಯ, ಶ್ರೀನಗರ ಕಿಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ”