Thursday, October 16, 2025
Google search engine
Homeಜಿಲ್ಲಾಎರಡು ದಿನ ಜಿಲ್ಲೆಯಲ್ಲಿ ರೆಡ್ ಅಲರ್ಟ್: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
spot_img

ಎರಡು ದಿನ ಜಿಲ್ಲೆಯಲ್ಲಿ ರೆಡ್ ಅಲರ್ಟ್: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಬೆಳಗಾವಿ: ಇಂದು ಮತ್ತು ನಾಳೆ ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬಹಳಷ್ಟು ಮಳೆ ಆಗುತ್ತಿದೆ. ಹಾಗಾಗಿ, ಅವಶ್ಯಕತೆ ಇದ್ದರೆ ಮಾತ್ರ ಜನರು ಹೊರಗಡೆ ಬರಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಿನ್ನೆ ಮತ್ತು ಇಂದು ಶಾಲೆಗಳಿಗೆ ರಜೆ ಘೋಷಿಸಿದ್ದೇವು. ನಾಳೆಯೂ ಅವಶ್ಯಕತೆ ಬಿದ್ದರೆ ರಜೆ ನೀಡುವ ಕುರಿತು ಸಾಯಂಕಾಲದೊಳಗೆ ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನಾನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿ.ಪಂ. ಸಿಇಒ ಅವರು ಕೂಡಿಕೊಂಡು ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆಗೆ ಸಭೆ ಮಾಡಿದ್ದೇವೆ ಎಂದರು.

ನಿನ್ನೆ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 53 ಸಾವಿರ ಕ್ಯೂಸೆಕ್ ನೀರು ಬಿಡುವ ಮಾಹಿತಿ ಸಿಕ್ಕಿದೆ. ಆ ನೀರು ನಮ್ಮ ಜಿಲ್ಲೆ ತಲುಪಲು ಸುಮಾರು 40 ಗಂಟೆ ಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಜಲಸಂಪನ್ಮೂಲ ಇಲಾಖೆಯ ಎಸಿಎಸ್ ಅವರು ಆಲಮಟ್ಟಿ ಜಲಾಶಯದಿಂದ ಇಂದು ಬೆಳಿಗ್ಗೆಯಿಂದಲೇ 1.5 ಲಕ್ಷ ಕ್ಯೂಸೆಕ್ ನೀರ‌ನ್ನು ಬಿಡಲು ಸೂಚಿಸಿದ್ದಾರೆ. ಅದನ್ನು ಮುಖ್ಯ ಇಂಜಿನಿಯರ್ ನಿರ್ವಹಣೆ ಮಾಡುತ್ತಿದ್ದಾರೆ. ರಾಜಾಪುರ ಬ್ಯಾರೇಜ್ ಬಳಿ 70 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಕಲ್ಲೋಳ ಬ್ಯಾರೇಜ್ ನಲ್ಲಿ ವೇದಗಂಗಾ ಮತ್ತು ದೂಧಗಂಗಾ ನದಿಗಳ 93 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಇದರ ಜೊತೆಗೆ ಘಟಪ್ರಭಾ ನೀರು ಸೇರಿಕೊಂಡು ಹಿಪ್ಪರಗಿ ಬ್ಯಾರೇಜ್ ಮೂಲಕ ಆಲಮಟ್ಟಿ ಜಲಾಶಯಕ್ಕೆ ಸೇರುತ್ತದೆ ಎಂದರು.

ಕೃಷ್ಣಾ ನದಿ ಪಾತ್ರದಲ್ಲಿ ಸದ್ಯಕ್ಕೆ ಆತಂಕ ಇಲ್ಲ:ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿದು ಬಂದರೆ ಪ್ರವಾಹ ಸೃಷ್ಟಿಯಾಗುತ್ತದೆ. ಹಾಗಾಗಿ, ಸದ್ಯಕ್ಕೆ ಕೃಷ್ಣಾ ನದಿ ಪಾತ್ರದಲ್ಲಿ ಯಾವುದೇ ಆತಂಕದ ಸ್ಥಿತಿ ನಿರ್ಮಾಣ ಆಗಿಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಎಲ್ಲ ಶಾಸಕರಿಗೆ ಮಳೆ ಕುರಿತು ಮಾಹಿತಿ ನೀಡಿದ್ದೇವೆ. ನದಿ ನೀರು ನುಗ್ಗುವ ಸಾಧ್ಯತೆ ಇರುವ ಗ್ರಾಮಗಳಲ್ಲಿನ ಜನರಿಗೆ ತಿಳುವಳಿಕೆ ನೀಡುವಂತೆ ತಹಶೀಲ್ದಾರ್ ಗಳಿಗೆ ಸೂಚಿಸಿದ್ದೇವೆ. ಮಹಾರಾಷ್ಟ್ರದಿಂದ ಬರುವ ನೀರಿನಲ್ಲಿ ಇನ್ನೂ 60 ಸಾವಿರ ಕ್ಯೂಸೆಕ್ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ, ಎಲ್ಲೆಲ್ಲಿ ತೊಂದರೆ ಆಗುತ್ತದೆಯೋ ಅಲ್ಲಿ ಕಾಳಜಿ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಳ್ಳುವಂತೆ ಆದೇಶಿಸಿದ್ದೇನೆ. ಅದೇರೀತಿ ಪೊಲೀಸ್ ಇಲಾಖೆ ಕೂಡ ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

53 ಸಾವಿರ ಕ್ಯೂಸೆಕ್ ಬಂದರೆ ಗೋಕಾಕಿಗೆ ಪ್ರವಾಹ:ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳಿಂದ ಗೋಕಾಕ್ ತಾಲ್ಲೂಕಿನ ಲೋಳಸೂರ ಸೇತುವೆಯಲ್ಲಿ ಸದ್ಯಕ್ಕೆ 43 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. 53 ಸಾವಿರ ಕ್ಯೂಸೆಕ್ ನೀರು ಬಂದರೆ ಗೋಕಾಕ್ ನಗರದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿ, ಎಚ್ಚರಿಕೆ ವಹಿಸುವಂತೆ ಗೋಕಾಕ್ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ. ಗೋಕಾಕ್ ನ ಕೆಲ ಪ್ರದೇಶದಲ್ಲಿ ಕಳೆದ ವರ್ಷ ಸಮಸ್ಯೆ ಆಗಿತ್ತು. ಹಾಗಾಗಿ, ಈ ಬಾರಿಯೂ ಅವರಿಗೆ ಅಲ್ಲಿನ ಮುನ್ಸಿಪಲ್ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮೊಹಮ್ಮದ್ ರೋಷನ್ ಹೇಳಿದರು.

ಮಲಪ್ರಭೆಯ ಆತಂಕ ಇಲ್ಲ:ಮಲಪ್ರಭಾ ನದಿಯಲ್ಲಿ 14 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಹಾಗಾಗಿ, ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. 25 ಸಾವಿರ ಕ್ಯೂಸೆಕ್ ನೀರು ಹರಿದರೆ ರಾಮದುರ್ಗ ತಾಲ್ಲೂಕಿನಲ್ಲಿ ಸಮಸ್ಯೆ ಉದ್ಭವಿಸುತ್ತದೆ. ಸದ್ಯಕ್ಕೆ ಮಲಪ್ರಭಾ ನದಿಗೆ ವಾಡಿಕೆಯಷ್ಟು ನೀರು ಹರಿಯುತ್ತಿದೆ ಎಂದರು.

30 ಕಾಳಜಿ ಕೇಂದ್ರ ತೆರೆದಿದ್ದೇವೆ: ರೈತ ಬಾಂಧವರು ಮೋಟರ್ ಪರೀಕ್ಷಿಸಲು ನದಿ ದಂಡೆಯ ಬಳಿ ಹೋಗಬಾರದು. ನೀರು ನಿಂತಿರುವಾಗ ಎಲ್ಲಿ ಗುಂಡಿ ಇದೆ ಅಂತಾ ಗೊತ್ತಾಗುವುದಿಲ್ಲ. ಹಾಗಾಗಿ, ಎಲ್ಲರೂ ಎಚ್ಚರಿಕೆ ವಹಿಸಬೇಕು. ಕಂದಾಯ, ಪೊಲೀಸ್, ಅಗ್ನಿಶಾಮಕದಳದ ಅಧಿಕಾರಿಗಳು ನೀಡುವ ಸೂಚನೆಯನ್ನು ಜಿಲ್ಲೆಯ ಜನರು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಮಗೆ ಸದ್ಯಕ್ಕೆ 30 ಕಾಳಜಿ ಕೇಂದ್ರಗಳ ಅವಶ್ಯಕತೆ ಇದೆ. ಇದೇ ರೀತಿ ಮಳೆ ಮುಂದುವರಿದರೆ ಮತ್ತೆ 20 ಕೇಂದ್ರಗಳ ಅವಶ್ಯಕತೆ ಇರುತ್ತದೆ. ಆದರೆ, ಮುನ್ನೆಚ್ಚರಿಕೆಯಾಗಿ 550 ಕಾಳಜಿ ಕೇಂದ್ರಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ಮೊಹಮ್ಮದ್ ರೋಷನ್ ಹೇಳಿದರು.

ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ:ದುರಾದೃಷ್ಟವಶಾತ್ ಗೋಕಾಕಿನಲ್ಲಿ ಮನೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಬಹಳ ಹಳೆಯ ಮನೆಯಲ್ಲಿ ಅವರು ವಾಸವಿದ್ದರು. ಅವರ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ. ಮೃತರಿಗೆ ಪರಿಹಾರಧನ ತಕ್ಷಣ ನೀಡಲಾಗುವುದು. ಗಾಯಾಳುಗಳು ಏಳು ದಿನ ಆಸ್ಪತ್ರೆಯಲ್ಲಿ ದಾಖಲಾದರೆ ಅವರಿಗೂ ಪರಿಹಾರ ವಿತರಿಸುವಂತೆ ಅಲ್ಲಿನ ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇನೆ ಎಂದರು.

RELATED ARTICLES
- Advertisment -spot_img

Most Popular

error: Content is protected !!