ಬೆಳಗಾವಿ: ದೇಶದ ವಿವಿಧೆಡೆ ಯುದ್ಧ ಮತ್ತು ತುರ್ತು ಪರಿಸ್ಥಿತಿ ಎದುರಿಸುವ ಬ್ಲಾಕ್ ಔಟ್ ಅಣಕು ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಬೆಳಗಾವಿ ನಗರದಲ್ಲೂ ಇಂದು ಸಂಜೆ ಹಮ್ಮಿಕೊಳ್ಳಲಾಗಿತ್ತು. ನಗರದ ಎರಡು ಪ್ರದೇಶಗಳಲ್ಲಿ 15 ನಿಮಿಷ ಸಂಪೂರ್ಣ ಕಗ್ಗತ್ತಲು ಆವರಿಸಿತ್ತು.
ಕೇಂದ್ರ ಸರ್ಕಾರದ ಸೂಚನೆಯಂತೆ ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಪಾಲಿಕೆ ಆಯುಕ್ತೆ ಶುಭಾ.ಬಿ ಅವರ ನೇತೃತ್ವದಲ್ಲಿ ಬ್ಲಾಕ್ಔಟ್ ಅಣಕು ಪ್ರದರ್ಶನ ನಡೆಯಿತು. ಹನುಮಾನ ನಗರ, ಕುವೆಂಪು ನಗರದಲ್ಲಿ ಈ ಅಣಕುಪ್ರದರ್ಶನ ಏರ್ಪಡಿಸಲಾಗಿತ್ತು.
ಐದು ಸೈರನ್ ಮೊಳಗುತ್ತಿದ್ದಂತೆ ಈ ಎರಡೂ ಪ್ರದೇಶಗಳಲ್ಲಿ ವಿದ್ಯುತ್ ದೀಪಗಳು ಬಂದ್ ಆದವು. ಮನೆ, ಬೀದಿ ದೀಪಗಳು, ವ್ಯಾಪಾರಿ ಮಳಿಗೆಗಳು, ಅಪಾರ್ಟ್ಮೆಂಟ್ ಗಳಲ್ಲಿ ಸಂಪೂರ್ಣವಾಗಿ ವಿದ್ಯುತ್ ಸ್ಥಗಿತಗೊಂಡಿತು. 15 ನಿಮಷಗಳ ಕಾಲ ನಡೆದ ಬ್ಲಾಕ್ಔಟ್ ಅಣುಕು ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಾಲಿಕೆ ಆಯುಕ್ತೆ ಶುಭಾ ಬಿ. ಮಾಧ್ಯಮಗಳ ಜೊತೆಗೆ ಮಾತನಾಡಿ, ಕಳೆದ ಮೂರು ದಿನಗಳಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದೇವು. ಯುದ್ಧದ ಭೀತಿ ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಕುರಿತು ಇಂದು ಅಣಕು ಪ್ರದರ್ಶನ ಮಾಡಲಾಯಿತು. ನಾವು ಐದು ಸೈರನ್ ಕೂಗಿಸುತ್ತಿದ್ದಂತೆ ಜನರು ಸ್ವಯಂ ಪ್ರೇರಿತವಾಗಿ ತಮ್ಮ ಮನೆಯ ವಿದ್ಯುತ್ ದೀಪ ಬಂದ್ ಮಾಡಿ ಸಹಕರಿಸಿದ್ದು, ಬ್ಲಾಕ್ ಔಟ್ ಅಣಕು ಪ್ರದರ್ಶನ ಯಶಸ್ವಿಯಾಗಿದೆ. ಹಾಗಾಗಿ, ಇಲ್ಲಿನ ಸ್ಥಳೀಯರಿಗೆ ನಾನು ಜಿಲ್ಲಾಡಳಿತ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಈ ವೇಳೆ ನಗರಸೇಕರು, ಪೊಲೀಸ್, ಪಾಲಿಕೆ, ಕೆಇಬಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಸ್ಥಳೀಯರು ಹಾಜರಿದ್ದು ಅಣಕು ಪ್ರದರ್ಶನ ಯಶಸ್ವಿಗೊಳಿಸಿದರು.