ಹುಬ್ಬಳ್ಳಿ, ಜನವರಿ 18: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಕಸಬಾಪೇಟ ಠಾಣೆ ಪೊಲೀಸರು (Kasabapet Police Station) ಬಂಧಿಸಿದ್ದಾರೆ. ಅಶ್ಪಾಕ್ ಜೋಗನ್ಕೊಪ್ಪ (38) ಅತ್ಯಾಚಾರ ಎಸಗಿದ ಆರೋಪಿ. ಹುಬ್ಬಳ್ಳಿಯ (Hubballi) ಶರಾವತಿ ನಗರದ ಕೆಇಬಿ ಲೇಔಟ್ ನಿವಾಸಿಯಾಗಿರುವ ಅಶ್ಪಾಕ್ ಜೋಗನ್ಕೊಪ್ಪ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಅಂಗಡಿ ಇಟ್ಟುಕೊಂಡಿದ್ದಾನೆ.
ಅಶ್ಪಾಕ್ ಜೋಗನ್ಕೊಪ್ಪ ತನ್ನ ಅಂಗಡಿಗೆ ಬರುವ ಬಡ ಹೆಣ್ಣುಮಕ್ಕಳ ಜೊತೆ ಬಣ್ಣ ಬಣ್ಣದ ಮಾತುಗಳನ್ನು ಆಡಿ, ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದನು. ಬಳಿಕ, ಅವರಿಗೆ ಹಣದಾಸೆ ತೋರಿಸಿ ಪ್ರೀತಿಸುವ ನಾಟಕವಾಡುತ್ತಿದ್ದನು. ನಂತರ, ಪ್ರೀತಿಯ ಹೆಸರಿನಲ್ಲಿ ಮಂಚಕ್ಕೆ ಕರೆಯುತ್ತಿದ್ದನು. ಅಲ್ಲಿ, ಖಾಸಗಿ ಕ್ಷಣಗಳ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳುತ್ತಿದ್ದನು.
ಈ ರಾಸಲೀಲೆಯ ವಿಡಿಯೋಗಳನ್ನು ಮತ್ತು ಇಟ್ಟುಕೊಂಡು “ನಾನು ಹೇಳಿದಂತೆ ಕೇಳು” ಎಂದು ಬ್ಲ್ಯಾಕ್ಮೇಲ್ ಮಾಡುತ್ತಿದ್ದನು. ಈ ರೀತಿಯಾಗಿ 10ಕ್ಕೂ ಹೆಚ್ಚು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಜೊತೆ ಚೆಲ್ಲಾಟವಾಡುತ್ತಿದ್ದನು. ಇಷ್ಟಕ್ಕೇ ಸುಮ್ಮನಾಗದ ಆರೋಪಿ ಆಶ್ಪಕ್ ಮಹಿಳೆಯರಿಗೆ ವಿಡಿಯೋ ಕರೆ ಮಾಡಿ, ಖಾಸಗಿ ಅಂಗಾಂಗಳನ್ನು ತೋರಿಸುವಂತೆ ಹೇಳುತ್ತಿದ್ದನು. ಮಹಿಳೆಯರು ನಗ್ನವಾದ ಬಳಿಕ, ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು.
ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಪೋಷಕರು ಅಶ್ಪಾಕ್ ಜೋಗನ್ಕೊಪ್ಪ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಕಸಬಾ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ, ಆರೋಪಿ ಅಶ್ಪಾಕ್ ಜೋಗನ್ಕೊಪ್ಪನನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಅಶ್ಪಾಕ್ ಜೋಗನ್ಕೊಪ್ಪ ಮೊಬೈಲ್ನಲ್ಲಿ 10ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಆಡಿದ ರಾಸಲೀಲೆಯ ವಿಡಿಯೋಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಮೂಲಕ ಹಲವು ಮಾಹಿತಿ ಬಹಿರಂಗ: ಪೊಲೀಸ್ ಆಯುಕ್ತ
ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸಾಕ್ಷಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದೇವೆ. ಅವನಿಂದ ಇನ್ನೂ ಕೆಲವರು ನೊಂದಿರುವುದು ಕಂಡುಬಂದಿದೆ. ಆತನ ಬಳಿ ಕೆಲವು ವಿಡಿಯೋಗಳು ಸಹ ಸಿಕ್ಕಿವೆ ಎಂದು ತಿಳಿಸಿದರು.
ಅಪ್ರಾಪ್ತ ಬಾಲಕಿಗೆ ತಂದೆ-ತಾಯಿ ಇರಲಿಲ್ಲ, ಅಜ್ಜಿಯ ಬಳಿ ಇದ್ದಳು. ಆಕೆಗೆ ಹಣ ನೀಡಿ ದುರುಪಯೋಗ ಪಡಿಸಿಕೊಂಡಿದ್ದಾನೆ. ನಮಗೆ ಸಿಕ್ಕ ಸಾಕ್ಷಿ ಆಧಾರದ ಮೇಲೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳುತ್ತೇವೆ. ಮೊಬೈಲ್ನಲ್ಲಿ ಸಾಕಷ್ಟು ಮಾಹಿತಿ ಸಿಕ್ಕಿವೆ. ಪ್ರಕರಣದಲ್ಲಿ ಇನ್ನು ಹೆಚ್ಚಿನ ನೊಂದವರಿದ್ದಾರೆ. ಈತನ ಮೇಲೆ ಯಾವುದೇ ಹಳೆಯ ಪ್ರಕರಣಗಳಿಲ್ಲ. ನೊಂದಿರುವ ಬಾಲಕಿ 13 ವರ್ಷದವಳಾಗಿದ್ದಾಳೆ. ಹಣದ ಆಮಿಷ ತೋರಿಸಿದ್ದಾನೆ. ಈತನಿಗೆ ಈಗಾಗಲೇ ಮದುವೆ ಸಹ ಆಗಿದೆ. ಇನ್ನು, ಎಷ್ಟು ಜನ ನೊಂದವರಿದ್ದಾರೆ ಅನ್ನೋದು ತನಿಖೆ ನಂತರ ತಿಳಿಯಲಿದೆ ಎಂದರು .